ಬರ್ಲಿನ್ ಕಾಂಗ್ರೆಸ್

	1878ರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬ್ರಿಟನ್, ಇಟಲಿ, ಫ್ರಾನ್ಸ್, ಜರ್ಮನಿ ಆಸ್ಟ್ರಿಯ-ಹಂಗೇರಿ, ಟರ್ಕಿ ಮತ್ತು ರಷ್ಯ ದೇಶಗಳ ನಡುವೆ ಜರ್ಮನಿಯ ಚಾನ್ಸ್‍ಲರ್ ಆಟೋ ಫಾನ್ ಬಿಸ್ಮಾರ್ಕನ ಅಧ್ಯಕ್ಷತೆಯಲ್ಲಿ ಬರ್ಲಿನ್ನಿನಲ್ಲಿ ನಡೆದ ಒಂದು ಅಂತರಾಷ್ಟ್ರೀಯ ಸಭೆ. 1878ರ ಮಾರ್ಚಿನಲ್ಲಿ ಸಾನ್-ಸ್ಟೆಫನೊದಲ್ಲಿ ಆದಂಥ ಒಪ್ಪಂದ ರಷ್ಯ ಮತ್ತು ಟರ್ಕಿಗಳ 1877ರಲ್ಲಿ ನಡೆದ ಕದನವನ್ನು ಕೊನೆಗಾಣಿಸಿದರೂ ರಷ್ಯದ ವಿಶಾಲ ಬಲ್ಗೇರಿಯ ನಿರ್ಮಾಣ ವಿಚಾರವನ್ನು ಆಸ್ಟ್ರಿಯ-ಹಂಗೇರಿ, ಗ್ರೇಟ್ ಬ್ರಿಟನ್ ವಿರೋಧಿಸಿದುವು. ಎಲ್ಲರಿಗೂ ಸಮ್ಮತವಾಗುವ ಮಾರ್ಗ ಕಂಡುಹಿಡಿಯಲು ಸಭೆ ಸೇರಬೇಕೆಂಬ ಜರ್ಮನಿಯ ಚಾನ್ಸಲಕರ್ ಆಟೋ ಫಾನ್ ಬಿಸ್ಮಾರ್ಕನ ಸಲಹೆಯನ್ನು ಎಲ್ಲರೂ ಒಪ್ಪಿದರು. ಈ ಮಧ್ಯೆ 1878 ಮೇನಲ್ಲಿ ಬ್ರಿಟನ್ನಿನ ವಿದೇಶ ವ್ಯವಹಾರಗಳ ಕಾರ್ಯದರ್ಶಿ ಲಂಡನ್ನಿನಲ್ಲಿ ರಷ್ಯದ ರಾಯಭಾರಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ರಷ್ಯ ವಿಶಾಲ ಬಲ್ಗೇರಿಯಾ ನೀತಿಯನ್ನು ಕೈಬಿಟ್ಟಿತು. ಆಸ್ಟ್ರಿಯ ಮತ್ತು ಗ್ರೇಟ್ ಬ್ರಿಟನ್ನುಗಳು 1878 ಜೂನ್ 6ರಂದು ಸಭೆ ಸೇರಿ ಸ್ವಾಯತ್ತತೆಯ ಪುಟ್ಟ ಬಲ್ಗೇರಿಯಾ ರಾಜ್ಯದ ನಿರ್ಮಾಣಕ್ಕೆ ಬರ್ಲಿನ್ ಕಾಂಗ್ರೆಸ್ ಸಭೆಯಲ್ಲಿ ಒಪ್ಪಿಗೆ ಪಡೆಯಲು ಒಟ್ಟಿಗೆ ವ್ಯವಹರಿಸಲು ಒಪ್ಪಂದ ಮಾಡಿಕೊಂಡವು. ಇದರಿಂದಾಗಿ ಬರ್ಲಿನ್ ಕಾಂಗ್ರೆಸ್ ಸಭೆ ಸೇರುವ ಮೊದಲೇ ನಿಯಮಿತ ಎಲ್ಲೆಕಟ್ಟಿನ ಬಲ್ಗೇರಿಯಾದ ನಿರ್ಮಾಣಕ್ಕೆ ತತ್ತ್ವಶಃ ಒಪ್ಪಿಕೊಳ್ಳಲಾಗಿತ್ತೆನ್ನಬಹುದು.

	ಪೂರ್ವ ಸಿದ್ಧತೆಯಂತೆ ಬರ್ಲಿನ್ ಕಾಂಗ್ರೆಸ್ 1878 ಜೂನ್ 13ರಂದು ಬಿಸ್ಮಾರ್ಕನ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡಿತು. ಗ್ರೇಟ್ ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ, ಟರ್ಕಿ, ಆಸ್ಟ್ರಿಯ-ಹಂಗೇರಿ ಮತ್ತು ರಷ್ಯ ದೇಶಗಳು ಈ ಸಭೆಯಲ್ಲಿ ಒಪ್ಪಿ ಸಹಿ ಹಾಕಿದ ಒಪ್ಪಂದಗಳನ್ನು ನಾಲ್ಕು ಭಾಗಗಳಾಗಿ ಮಾಡಬಹುದು.
.
	1. ಈ ಒಪ್ಪಂದ ಬಾಲ್ಕನ್ ಪ್ರದೇಶಕ್ಕೆ ಉತ್ತರದಲ್ಲಿ ವರ್ನ್ ಮತ್ತು ಸೋಫಿಯ ನಗರಗಳನ್ನು ಒಳಗೊಂಡಂತೆ ಸಣ್ಣ ಬಲ್ಗೇರಿಯಾದ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿತು. ಮುಂದೆ ಸಂಜಕ್ ಪಟ್ಟಣವೂ ಸೇರಿಕೊಂಡ ಸ್ವಾಯತ್ತತೆ ಪಡೆದ ಈ ರಾಜ್ಯ ಟರ್ಕಿ ಸುಲ್ತಾನನ ಅಧೀನದಲ್ಲಿ ಸಾಮಂತ ರಾಜ್ಯವಾಗಿ ಒಬ್ಬ ಚುನಾಯಿತ ಕ್ರಿಶ್ಚಿಯನ್ ರಾಜಕುಮಾರನ ಆಡಳಿತಕ್ಕೆ ಒಳಪಟ್ಟಿರುತ್ತದೆ. ಬಾಲ್ಕನ್ ಶ್ರೇಣಿಯ ದಕ್ಷಿಣಕ್ಕೆ ಪೂರ್ವ ರುಮೇನಿಯ ಎಂಬ ಒಂದು ಪ್ರಾಂತ್ಯವನ್ನು ನಿರ್ಮಿಸಲಾಯಿತು. ಅದು ಸುಲ್ತಾನನ ಸೈನಿಕ ಮತ್ತು ರಾಜಕೀಯ ಅಧಿಕಾರಕ್ಕೊಳಪಟ್ಟಿದ್ದು ಆಡಳಿತ ಸ್ವಾಯತ್ತತೆಯನ್ನು ಹೊಂದಿರಬೇಕೆಂದು ಮತ್ತು ಅದಕ್ಕೆ ಒಬ್ಬ ಕ್ರಿಶ್ಚಿಯನ್ ಗವರ್ನರ್ ಇರಬೇಕೆಂದು ಒಪ್ಪಿಕೊಳ್ಳಲಾಯಿತು.

	2. ಬೋಸ್ನಿಯ-ಹರ್ಜಿಗೋವಿನಗಳನ್ನು ಆಸ್ಟ್ರಿಯ-ಹಂಗೇರಿಗಳ ಆಡಳಿತಕ್ಕೆ ಒಳಪಡಿಸಲಾಯಿತು. ಆದರೆ ವಾಸ್ತವಿಕವಾಗಿ ಅದು ಆಟೋಮನ್ ಸಾಮ್ರಾಜ್ಯದ ಭಾಗವಾಗಿ ಉಳಿಯಿತು. ಮಾಂಟೆನೀಗ್ರೋಕ್ಕೆ ಏಡ್ರಿಯಾಟಿಕ್ ಸಮುದ್ರಕ್ಕೆ ಬಾರ್‍ನಲ್ಲಿ ಪ್ರವೇಶಕ್ಕೆ ಅವಕಾಶ ಕೊಟ್ಟು ಸ್ವಲ್ಪ ಪ್ರದೇಶವನ್ನು ಕೊಡಲಾಯಿತು. ಆದರೆ ಹೊಸದಾಗಿ ಕೊಡಲ್ಪಟ್ಟ ಪ್ರದೇಶ ಸಾನ್ ಸ್ಟೆಫನೋ ಒಪ್ಪಂದದಲ್ಲಿ ಕೊಡಲ್ಪಟ್ಟಿದ್ದ ಪ್ರದೇಶಕ್ಕಿಂತ ಕಡಿಮೆ ಇತ್ತು. ಸರ್ಬಿಯದಿಂದ ಮಾಂಟೆನೀಗ್ರೋವನ್ನು ಪ್ರತ್ಯೇಕಿಸಿದ್ದ ನೋವಿಬಜಾರ್‍ನ ಸಂಜಕ್‍ನಲ್ಲಿ ರಕ್ಷಣಾ ಪಡೆಯನ್ನಿಡಲು ಆಸ್ಟ್ರಿಯ-ಹಂಗೇರಿ ಹಕ್ಕನ್ನು ಪಡೆದುಕೊಂಡಿತು. ಬೋಸ್ನಿಯ-ಹರ್ಜಿಗೋವಿಗಳ ಸ್ಲಾವ್ ಜನಗಳು ಆಸ್ಟ್ರಿಯ-ಹಂಗೇರಿಯ ಪ್ರಜೆಗಳಾಗಿಲ್ಲದಿದ್ದರೂ ಆಸ್ಟ್ರಿಯ-ಹಂಗೇರಿಗಳ ಹತೋಟಿಗೆ ಒಳಪಟ್ಟರು. ಆಸ್ಟ್ರಿಯ-ಹಂಗೇರಿ ನೋವಿ ಬಜಾರಿನ ಸಂಜಕ್‍ನಲ್ಲಿ ಪ್ರವೇಶಿಸುವ ಹಕ್ಕನ್ನು ಪಡೆದುಕೊಂಡಿದ್ದರಿಂದ, ಸರ್ಬಿಯ-ಮಾಂಟಿನೀಗ್ರೋಗಳು ಒಟ್ಟುಗೊಡದಂತೆ ನೋಡಿಕೊಳ್ಳಲು ಅವಕಾಶ ಪಡೆದುಕೊಂಡಿತು.

	3. ರಮೇನಿಯ ಮತ್ತು ಸರ್ಬಿಯ ಅಲ್ಪಸ್ವಲ್ಪ ಪ್ರಾದೇಶಿಕ ಬದಲಾವಣೆಗಳೊಂದಿಗೆ ತಮ್ಮ ಸ್ವಾತಂತ್ರ್ಯಕ್ಕೆ ಮಾನ್ಯತೆ ಪಡೆದುಕೊಂಡವು. ರುಮೇನಿಯ, ರಷ್ಯ ಮತ್ತು ಸರ್ಬಿಯಗಳ ನಡುವೆ ಕೆಲವು ಪಟ್ಟಣಗಳು ಅದಲು ಬದಲಾದವು. ಕ್ರೀಟ್ 1868ರ ಕಾಯಿದೆಯ ಪ್ರಕಾರ ಆಳಲ್ಪಡಬೇಕೆಂದು ಗ್ರೀಸ್ ಅನುಮತಿ ಪಡೆದುಕೊಂಡಿತು. ಡ್ಯಾನ್ಯೂಬ್ ನದಿಯ ಮೇಲಿನ ಸಂಚಾರವನ್ನು ಅಂತರ ರಾಷ್ಟ್ರೀಯ ಮೇಲ್ವಿಚಾರಣೆಗೆ ಒಳಪಡಿಸಲಾಯಿತು.

	4. ಟರ್ಕಿ ರಷ್ಯಕ್ಕೆ ಅರ್ದಹಾನ್, ಕಾರ್ಸ್ ಮತ್ತು ಬಟೂಮ್‍ಗಳನ್ನು ಬಿಟ್ಟು ಕೊಡಲು ಒಪ್ಪಿಕೊಂಡಿತು. ಆದರೆ ಬಟೂಮ್ ಒಂದು ಸ್ವತಂತ್ರ ಬಂದರಾಗಿರಬೇಕೆಂಬ ಷರತ್ತನ್ನು ಹಾಕಲಾಯಿತು. ಟರ್ಕಿ ಆರ್ಮೇನಿಯನ್ನರಿದ್ದ ಪ್ರದೇಶಗಳಲ್ಲಿ ಸುಧಾರಣೆಗಳನ್ನು ತರಲು ಮತ್ತು ಎಲ್ಲ ಆಟೋಮನ್ ಪ್ರದೇಶಗಳಲ್ಲಿ ಧಾರ್ಮಿಕ ಸಹಿಷ್ಣುತೆ ತೋರಲು ಒಪ್ಪಿಕೊಂಡಿತು. 

	ಬರ್ಲಿನ್ ಸಮಾವೇಶದಿಂದ ಆಸ್ಟ್ರಿಯ-ಹಂಗೇರಿ ಲಾಭ ಪಡೆದುಕೊಂಡವು. ಗ್ರೇಟ್ ಬ್ರಿಟನಿಗೆ ತೃಪ್ತಿಯಾಯಿತು. ಆದರೂ ಬರ್ಲಿನ್ ಒಪ್ಪಂದ ಪೌರಸ್ತ್ಯ ಪ್ರಶ್ನೆಯನ್ನು ಬಗೆಹರಿಸಲಿಲ್ಲ. ಟರ್ಕಿಯ ಅಧೀನಲ್ಲಿದ್ದ ಕ್ರಿಶ್ಚಿಯನ್ ಜನಗಳು ಅತೃಪ್ತರಾಗೇ ಉಳಿದರು. ಆಟೋಮನ್ ಆಡಳಿತವೇ ಅರಾಜಕತೆಯಿಂದ ಕೂಡಿದ್ದು ಈ ಪರಿಸ್ಥಿತಿಯನ್ನು ಸುಧಾರಿಸಲು ಸ್ವಲ್ಪವೂ ಪ್ರಯತ್ನಿಸಲಿಲ್ಲವಾದರೂ ಬರ್ಲಿನ್ ಒಪ್ಪಂದ ಯೂರೋಪಿನ ಇತಿಹಾಸದಲ್ಲಿ ಒಂದು ಮಹತ್ತ್ವಪೂರ್ಣ ಘಟನೆಯಾಗಿದೆ.
(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ